ಶುಕ್ರವಾರ, ಡಿಸೆಂಬರ್ 27, 2013

ನಾಡ ದೇವಿಯೆ

ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ;
ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ.
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ-
ಒಂದೆ ನೆಲದ ರಸ ಹೀರಲೇನು? ಸಿಹಿ, ಕಹಿಯ ರುಚಿಯ ಕಾಯಿ.
                                                          ನಾಡದೇವಿಯೆ...

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದಿ-
ಕಡೆಗಣಿಸುತವರ ನಡೆದಿರುವನೊಬ್ಬ, ಸ್ವಹಿತಕ್ಕೆ ಹಿಡಿದು ದೊಂದಿ.
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈಹೊತ್ತ ಬಡವನೊಬ್ಬ;
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬ.
                                                         ನಾಡದೇವಿಯೆ...

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂದೆ;
ದು:ಖಪೂರ ಉಕ್ಕುಕ್ಕಿ ಮೊರೆಯೆ, ಕೊಚ್ಚಿತ್ತು ಬಾಳದಂಡೆ.
ಹೊಟ್ಟೆಹೇಳಿಗೆಯ ಬಿಚ್ಚಿ, ಹಸಿದ ಹಾವನ್ನು ಚುಚ್ಚಿ ಕೆಣಕಿ-
ಯುಕ್ತಿರಾಗದಲಿ ಕುಣಿಸಿ, ದಣಿಸಿ, ನಲಿದಿಹರು ಹಲರು ಬದುಕಿ.
                                                       ನಾಡದೇವಿಯೆ...

ನರನನ್ನೆ ಗಾಳವಾಗಿಸುತ ಬಾಳ ನೀರಲ್ಲಿ, ನಲಿವ ನರಿಗೆ-
ನಾವೊಂದು ಎನುವ ಸತ್ಯಕ್ಕೆ ಅಡ್ಡಗಾಲೆಳೆವ ನಾಡಿನರಿಗೆ,
ಎಚ್ಚರವ ನೀಡಿ ತಿದ್ದುತಲಿರಲಿ ಕವಿಭಾವವೆಂಬ ಬಡಿಗೆ,
ತಾಯಿ ಭಾರತಿಯೆ, ಇದುವೆ ನಿನಗೆ ನಾ ಸಲಿಸಲಿರುವೆ ಕೊಡುಗೆ.
                                                      ನಾಡದೇವಿಯೆ...

ಗುರಿ ಮುಟ್ಟುತಿರಲಿ ಈ ಜೀವ ತಾನು, ಹಿಡಿದೊಂದು ದಿಟದ ದಾರಿ-
ಮರೆಯದಂತೆ ಹೊರಿಸಿರುವ ಋಣವ, ಕೃತಿಯಲ್ಲಿ ಅದನ್ನು ಸಾರಿ.
ನಿನ್ನೊಲವ ತೈಲ ನನ್ನೆದೆಯೊಳಿರಲಿ-ಬೆಳಗಿರಲಿ ಬಾಳ ಬತ್ತಿ;
ಕೊನೆಕಾಣಲಮ್ಮ ಅನುಭವದಿ ಮಾಗಿ, ನಿನ್ನಡಿಗೆ ಬಾಗಿ ನೆತ್ತಿ.
                                                      ನಾಡದೇವಿಯೆ...

                                   - ಕೆ. ಎಸ್. ನಿಸಾರ್ ಅಹಮದ್
                                     ' ನಿತ್ಯೋತ್ಸವ ' (೧೯೭೬)

ಕಾಮೆಂಟ್‌ಗಳಿಲ್ಲ: