ಸೋಮವಾರ, ನವೆಂಬರ್ 12, 2012

'ಒಂದು ಜಿಲೇಬಿ' ಜೊತೆ..

ಆತ್ಮೀಯರೇ,

ಚಲನಚಿತ್ರ ಗೀತೆಗಳ ಮೂಲಕ ಬಹು ಜನಪ್ರಿಯರಾಗಿರುವ ಕವಿ, ಕಥೆಗಾರ  ಜಯಂತ ಕಾಯ್ಕಿಣಿಯವರು ಕನ್ನಡ ಕಾವ್ಯದಲ್ಲಿಯು ಸಹ ವಿಭಿನ್ನ ಛಾಪು ಮೂಡಿಸಿದ್ದಾರೆ. ಸದ್ಯಕ್ಕೆ ನಾನು ಅವರ 'ಒಂದು ಜಿಲೇಬಿ' ಕವಿತಾ ಸಂಗ್ರಹದ ಕವಿತೆಗಳಲ್ಲಿ ಕಳೆದುಹೋಗಿದ್ದೇನೆ.

 ಪ್ರತಿ ಕವಿತೆಯೂ ತುಟಿಯಲ್ಲಿ ಕಿರುನಗೆ ಮೂಡಿಸುವಂತೆ ಭಾಸವಾಗುತ್ತಲೇ ಮನದಾಳದಲ್ಲಿ ವಿಷಾದದಲೆಗಳನ್ನೆಬ್ಬಿಸುತ್ತದೆ...
'ರವಿ ಕಾಣದ್ದನ್ನು ಕವಿ ಕಾಣಬಲ್ಲ' ಎಂಬುದು ನಿರೂಪಿತವಾಗುವಂತೆ ಕಾಯ್ಕಿಣಿಯವರು ವಸ್ತು-ವ್ಯಕ್ತಿಗಳನ್ನು ಗಮನಿಸುವ ರೀತಿ  ಅದ್ಭುತವಾದುದು. ಅವರ ಕವಿತೆಗಳಲ್ಲಿನ ಹೋಲಿಕೆ, ಪ್ರತಿಮೆಗಳು ದಿನ ನಿತ್ಯ ನಾವು ಗಮನಿಸಿಯೂ ಗಮನಿಸದ ಎಷ್ಟೋ ಚಿತ್ರಗಳನ್ನು ಕಣ್ಣ ಮುಂದೆ ತರುತ್ತವೆ.ನವ್ಯ ಕಾವ್ಯದಂತೆ ವಾಚ್ಯವೆನ್ನಿಸುತ್ತಲೇ ರಮ್ಯ ಕಾವ್ಯವನ್ನೂ ನೆನೆಸುತ್ತವೆ. ಈ ಸಂಕಲನದ ಕೆಲವು ಕವಿತೆಗಳು ನಿಮಗಾಗಿ..

ಅಕ್ಕರೆಯಿಂದ,
ಕನಸು..
ಘಾಟ್ ಸೆಕ್ಶನ್ 

ರಪ್ ರಪ್ ಎಂದು ತಗಡಿನ ತಲೆಯ ಮೇಲೆ ಬಿರುಮಳೆ 
ಅಪ್ಪಳಿಸಿದಷ್ಟೂ ಉತ್ತೇಜಿತಗೊಂಡು ಬಸ್ಸು 
ಮೋಡಗಳ ಕಡಲಲ್ಲಿ ಇಳಿಯುತ್ತಿದೆ.

ಸುತ್ತಲೂ ಮುತ್ತಲೂ ನೀರದ ನೀರಾದ ಕತ್ತಲು 
ಕರಗುತಿವೆ ನವಿಲುಗಿರಿ ನೀರಿನಾಚೆ 
ನಿಟ್ಟುಸಿರು ನಸುನಿದ್ರೆ ಗುಟ್ಟು ಪೊಟ್ಟಣ ಚೀಲ 
ಎಲ್ಲ ಈಚೆಗಿವೆ 
ಭಗ್ನ ಎಚ್ಚರಗಳ ಭಂಗಿಯಲ್ಲಿ

ಹಗಲಲ್ಲೇ ಮಂಕುದೀಪ ಉರಿಸಿಕೊಂಡು 
ಅರೆ ತುಂಬಿದ ಬೆಳಕಿನ ಕೊಡದಂತೆ 
ತುಳುಕುತ್ತದೆ ಬಸ್ಸು 
ಗಕ್ಕೆಂದು ತಿರುವಿನಲ್ಲಿ ಅವಾಕ್ಕಾಗಿ

ಚಾಲಕನೊಬ್ಬನಿಗೇ ಗೊತ್ತಿದೆ ಎಲ್ಲ ಆಚೆಯದು 
ಅಂದುಕೊಂಡಿದ್ದೆವು ಈ ತನಕ 
ಆದರೆ ಅವನೆದುರೂ ಈಗೊಂದು ಭಯದ ಬತ್ತಲೆಗಾಜು 
ರಭಸದಿಂದ ಎರಗುವ ಅಪರಿಚಿತ ನೀರನ್ನು 
ಬದಿಗೆ ತಳ್ಳುತ್ತಲೇ ಇದೆ 
ನಿರಂತರ ಏಕಾಕಿ ಹೋರಾಟದಲ್ಲಿ 

                                      - ಜಯಂತ ಕಾಯ್ಕಿಣಿ 
                                        ' ಒಂದು ಜಿಲೇಬಿ '
ಕಣ್ಣಿನಲ್ಲಿ ಬಿದ್ದ ಜಗವೆ 

ಅರ್ಧ ಬರೆದ ಪತ್ರದಂತೆ ಎಲ್ಲಿ ಹೊರಟೆ ಹಾರಿ 
ಹೊಸ ಗಾಳಿಯ ಕೈಯಲ್ಲಿ ಹಸನಾಗುತ ಪೋರಿ 

ತೇರಿನಲ್ಲಿ ದೇವರಿಲ್ಲ ಕೇರಿಯಲ್ಲಿ ಜನರು
 ಕಾಗದದ ದೋಣಿಯಲ್ಲಿ ಮುದ್ದು ಮಳೆಯ ಕೆಸರು 

ಪೇಟೆಯಲ್ಲಿ ಅಂಗಡಿಗಳು ಕಣ್ತೆರೆಯುವ ಹೊತ್ತು 
ನಿನ್ನ ಮೂಕ ಸಣ್ಣಲೋಕ ಅವರಿಗೇನು ಗೊತ್ತು 

ಗುರ್ತಿನವರು ಕೇಳಿಯಾರು ಎಲ್ಲಿ ಹೊರಟೆ ಜೋರು 
ನಿಟ್ಟುಸಿರಲಿ ಉಕ್ಕುತಿರಲು ಒಲೆಯ ಮೇಲೆ ಮೀನು ಸಾರು 

ಏನಾಯಿತು ಕ್ಷಣದಿ ಎಲ್ಲ ಸ್ತಬ್ಧವಾಯಿತೆ 
ಕಣ್ಣಿನಲ್ಲಿ ಬಿದ್ದ ಜಗವೆ ಒದ್ದೆಯಾಯಿತೆ

ಏನೋ ಮರೆತೆ ಅನಿಸಿದರೆ ಬಂದು ಬಿಡೆ ಮನೆಗೆ 
ಹಿತ್ತಲಲ್ಲಿ ಒಣಗುತಿದೆ ನಿನ್ನ ಒಂಟಿ ಕಿರಿಗೆ 

ಇಂಥದೊಂದು ಸೆಳೆತದಲ್ಲಿ ಉಕ್ಕಿ ಬಂದರೇನೇ
ಚೊಕ್ಕವಾಗಿ ಹೊಳೆದೀತು ನಿನ್ನ ಬಿಸಿಲ ಕೋಣೆ

                                  - ಜಯಂತ ಕಾಯ್ಕಿಣಿ 
                                       ' ಒಂದು ಜಿಲೇಬಿ '
ಅಡ್ಡಮರ 

ದಾರಿಗಡ್ಡ ಬಂತೆಂದು ರಾತ್ರೋರಾತ್ರಿ ದುಡಿದು 
ಆ ಮರವನ್ನು ಚಕ್ಕೆ ಚಕ್ಕೆ ಉರುಳಿಸಿದರು 
ಈಗ ಬಿದ್ದುಕೊಂಡಲ್ಲೂ ಅಕ್ಕಪಕ್ಕ 
ಪಿಟ್ಟೆನದೆ ಒಡೆಯುತ್ತಿದೆ ಚಿಗುರು

ಕಡಿದಿದ್ದು ಗೊತ್ತೇ ಆಗಲಿಲ್ಲವೆ ಛೇ ಛೇಡಿಸಿವೆ ಹಕ್ಕಿ 
ಅಂತರಿಕ್ಷದಲ್ಲೆ ರೆಕ್ಕೆ ಬಡಿಯುತ್ತ ನಿಂತು 
ಒಂದಿಷ್ಟು ಶಾಲೆ ಮಕ್ಕಳು  ದಾರಿಯಲ್ಲಿ 
ಅದಕ್ಕಾತು ಅಭ್ಯಾಸ ನೋಡುತಿರುವರು

ರೋಮಾಂಚ ಕಳಕೊಂಡ ಕೊಂಬೆಯೊಂದ 
ಕದ್ದೊಯ್ಯುತ್ತಿದ್ದಾಳೆ ಗುಡಿಸಲ ಅಜ್ಜಿ 
ಸೌದೆ ಚೌಕಾಶಿ ಮುಗಿಸುತ್ತಿವೆ ಟೆಂಪೋ ಕೈಗಾಡಿ 
ಮಣ್ಣ ತೂತಿನಲ್ಲಿ ಕಣ್ಣ ಕಳಕೊಂಡಿದೆ ಬೇರು 

ಎಂದಿನದೋ ಮಳೆಯಗಂಧ ಮರದ ಗಾಯಕ್ಕೆ 
ಬೇರೆಯದೆ ತಿರುಳ ಬಣ್ಣ ತೆರೆದ ರಹದಾರಿಗೆ 
ಚಿಗುರೆಲೆಗಳ ಸುತ್ತಿ ಮಕ್ಕಳೂದುತ್ತಿರುವ 
ಇಂಪಾದ ಪೀಪಿಯಲ್ಲಿ ಎಂಥದೋ ಮೊರೆ  

                                           - ಜಯಂತ ಕಾಯ್ಕಿಣಿ 
                                            ' ಒಂದು ಜಿಲೇಬಿ '
ಅಡಿ ಟಿಪ್ಪಣಿ

ಕೊಳ : ರಸ್ತೆ ಬದಿ ಕೂತ ಮುದಿ 
ಸ್ವಾತಂತ್ರ್ಯ ಯೋಧನ ಕಣ್ಣು 

 ಮರ : ಬಿಟ್ಟಲ್ಲೇ ಲಡ್ದಾದ  ಬೋಳು 
ಬಾವುಟದ ಕೋಲು 

ಚಂದ್ರ : ಇರುವೆಗಳ ಮಧ್ಯೆ ಚಲಿಸುತಿರುವ 
ಸ್ತಬ್ಧ ಚೂರು ರೊಟ್ಟಿ 

 ಸೂರ್ಯ : ಬಟ್ಟೆ ತೊಟ್ಟಿಲಲ್ಲಿ ಹೊಳೆವ 
ಕೈಕೂಸಿನ ನೆತ್ತಿ 

ನದಿ : ಮನೆ ಬಿಟ್ಟೋಡಿದ  ಪೋರಿಯ 
ಏದುಸಿರಿನ ಜಾಡು

ಕಾಮನಬಿಲ್ಲು : ಕಾಮಾಟಿಪುರದಲಿ ಒಡೆವ 
ಬಳೆಗಳ ಚೂರು 

ಹಗಲು : ಬೇಕಾರ್ ಪೋರನ ಎದುರು
ಬಿದ್ದ ರದ್ದಿ ಪತ್ರಿಕೆ 

ಹಕ್ಕಿ : ಸಂತ್ರಸ್ತರಿಗೆಂದೇ  ಬಾಲ್ಕನಿಯಿಂದ 
ಎಸೆದ ಹಳೇ ಹರಕು ಬಟ್ಟೆ 

ರಾತ್ರಿ : ಹಳೆ ಗೆಳೆಯನ ಅರಸುತ್ತಾ 
ಅಲೆದು ಬಂದ ಬವಳಿ 

ಇಂಚರ : ಶಿವಕಾಶಿ ಪಟಾಕಿಯಲಿ ಸುತ್ತಿದ 
ಎಳೆ ಕಂಠಗಳ ಸುರುಳಿ 

ಕವಿತೆ : ಸ್ವಂತ ವಿಳಾಸ ಇಲ್ಲದವ 
ಬರೆಯದ ಪತ್ರದ ಸಾಲು 

ಬೆಳಗು : ಮೂಕನ ಅರೆ ಎಚ್ಚರದಲಿ 
ಕೇಳಿ ಬಂದ ಹಾಡು 

                                         - ಜಯಂತ ಕಾಯ್ಕಿಣಿ 
                                           ' ಒಂದು ಜಿಲೇಬಿ '