ಶನಿವಾರ, ನವೆಂಬರ್ 6, 2010

ಆ ರೂಪ


ಮತ್ತೆ ಆ ರೂಪ ಎದೆಗೆ ಹಾಯುತಿದೆ
ಚಿತ್ತ ಸಂತಾಪದಲ್ಲಿ ಬೇಯುತಿದೆ.
ಎಂದೊ ಹುಗಿದಂಥ ನೆನಹ ಕೆದಕುತಿದೆ
ಮೌನದುತ್ತಾಪದಲ್ಲಿ ಹೊಗೆಯುತಿದೆ.

ಇದ್ದಕಿದ್ದಂತೆ ಹೃದಯ ಹೌಹಾರಿ
ಸದ್ದೆ ಇರದಂತೆ ರೋದಿಸಿದೆ ಚೀರಿ.
ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ;
ಜೀವ ಏನನ್ನೊ ಬೇಡಿ ದುಡುಕುತಿದೆ.
                                  ಮತ್ತೆ ಆ ರೂಪ....

ಅಂದಿನಾಮೋದವನ್ನೆ ಕನವರಿಸಿ
ಬಾರದ ಕಾಲಕಾಗಿ ಚಡಪಡಿಸಿ
ಒಲವಿನ ಕತೆಯ ಮರಳಿ ನೆನೆಯುತಿದೆ
ತೀರದ ಬಯಕೆ ಕಣ್ಣ ಹನಿಸುತಿದೆ.
                                 ಮತ್ತೆ ಆ ರೂಪ....

ಭಾವದಾವೇಗ ಕೊರಳ ಬಿಗಿಸುತಿರೆ
ಜೀವ ಜೀವಾಳವನ್ನೆ ಕಲಕುತಿರೆ
ಫಲಿಸದ ಬಯಕೆಗಾಗಿ ಯಾಚಿಸಿದೆ
ದೀನತಾಭಂಗಿ ಬದುಕ ನಾಚಿಸಿದೆ.
                              ಮತ್ತೆ ಆ ರೂಪ....

                                       - ಕೆ.ಎಸ್. ನಿಸಾರ್ ಅಹಮದ್
                                       ' ಬಹಿರಂತರ '

ಕಾಮೆಂಟ್‌ಗಳಿಲ್ಲ: